ಕೊಪ್ಪಂ

ದಕ್ಷಿಣ ಭಾರತದ ಮಧ್ಯಯುಗದ ಇತಿಹಾಸದಲ್ಲಿ ಪ್ರಸಿದ್ಧವಾದ ಕಲ್ಯಾಣ ಚಾಳುಕ್ಯರ ದೊರೆಯಾದ ಒಂದನೆಯ ಸೋಮೇಶ್ವರನಿಗೂ ರಾಜಾಧಿರಾಜ ಚೋಳನಿಗೂ 1053-54ರಲ್ಲಿ ಯುದ್ಧ ನಡೆದ ಸ್ಥಳ. ಈಗಿನ ರಾಯಚೂರು ಜಿಲ್ಲೆಯಲ್ಲಿದೆ. ಇತಿಹಾಸದಲ್ಲಿ ಕೊಪ್ಪಂ ಎಂದು ಹೆಸರಾಗಿದೆ. ತನ್ನ ತಮ್ಮ 2ನೆಯ ರಾಜೇಂದ್ರನೊಡಗೊಡಿ ಬಂದಿದ್ದ ರಾಜಾಧಿರಾಜ ಚೋಳ ಇಲ್ಲಿ ಚಾಳುಕ್ಯ ಸೈನ್ಯವನ್ನು ಎದುರಿಸಿದ. ಗಜಾರೂಢನಾಗಿದ್ದ ಚೋಳಚಕ್ರವರ್ತಿಯನ್ನು ಚಾಳುಕ್ಯಮಾಂಡಲಿಕ ಮಾರರಸ ಬಾಣದಿಂದ ಹೊಡೆದು ಕೊಂದ. ಆವರೆಗೂ ಹಿಂಬದಿಯ ಮೀಸಲು ಪಡೆಯೊಂದಿಗಿದ್ದ ರಾಜೆಂದ್ರ ಆಗ ಸೈನ್ಯದ ನಾಯಕತ್ವ ವಹಿಸಿ ಹೋರಾಡಿದ. ಚಾಳುಕ್ಯರಾಜಕುಮಾರ ಜಯಸಿಂಹನೂ ಕೆಲವು ದಂಡನಾಯಕರೂ ಪ್ರಾಣತೆತ್ತರು. ಚಾಳುಕ್ಯಸೈನ್ಯ ಯುದ್ಧರಂಗದಿಂದ ಹಿಮ್ಮೆಟ್ಟಿ ಕೊಲ್ಲಾಪುರದ ಕಡೆಗೆ ಹೊರಟಾಗ ಅದರ ಬೆನ್ನಟ್ಟಿ ಹೋದ ಚೋಳಸೈನ್ಯ ಕೊಲ್ಲಾಪುರದ ಬಳಿಯನ್ನು ತಲಪಿತು. ರಾಜೇಂದ್ರ ಅಲ್ಲಿ ತನ್ನ ಜಯುಸ್ತಂಭ ನೆಡಿಸಿ ಹಿಂದಿರುಗಿದನೆಂದು ಚೋಳರ ಶಾಸನಗಳು ತಿಳಿಸುತ್ತವೆ. 			(ಎಚ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ